ಅರುಣ ಋಷಿಯ ಮಗ. ಉದ್ದಾಲಕನೆಂದೂ ಹೆಸರು. ಅಪೋದಧೌಮ್ಯ ನೆಂಬ ಮಹರ್ಷಿಯ ಶಿಷ್ಯನಾಗಿದ್ದಾಗ, ಗದ್ದೆಗೆ ಹರಿಯುತ್ತಿದ್ದ ನೀರನ್ನು ಅಡ್ಡಗಟ್ಟಲು ತಾನೇ ಮಲಗಿ ನೀರನ್ನು ಕಟ್ಟಿ, ಗುರು ಹುಡುಕಿಕೊಂಡು ಬಂದು ಕರೆದಾಗ ನೀರಿನಿಂದ ಎದ್ದನಾಗಿ ಇವನಿಗೆ ಉದ್ದಾಲಕನೆಂದು ಹೆಸರು. ಕುಶಿಕಪುತ್ರಿ ಇವನ ಹೆಂಡತಿ. ನಚಿಕೇತನೂ ಶ್ವೇತಕೇತುವೂ ಇವನ ಮಕ್ಕಳು. ಕಹೋಳಮುನಿಯ ಹೆಂಡತಿ ಸುಜಾತಾ ಮಗಳು. ಬ್ರಹ್ಮಜ್ಞಾನಿಯಾದ ಅಷ್ಟಾವಕ್ರ ನೆಂಟ. ಛಾಂದೋಗ್ಯ ಉಪನಿಷತ್ತಿನಲ್ಲಿ ಈ ಉದ್ದಾಲಕ ಆರುಣಿಯೇ ಆಚಾರ್ಯನಾಗಿ ಕಾಣಿಸಿಕೊಳ್ಳುತ್ತಾನೆ. ಆರನೆಯ ಅಧ್ಯಾಯದಲ್ಲಿ ಇವನ ಉಪದೇಶ ಬರುತ್ತದೆ. ಗುರುವಿನ ಬಳಿ ಓದಿ ಗರ್ವದಿಂದ ಹಿಂದಿರುಗಿದ ತನ್ನ ಮಗ ಶ್ವೇತಕೇತುವಿಗೆ ಆತ್ಮಾ ತತ್ತ್ವಮಸಿ ಎನ್ನುವ ಬೋಧೆಯನ್ನು ಮಾಡಿ ಅವನನ್ನು ದಾರಿಗೆ ತರುತ್ತಾನೆ. ಉದ್ದಾಲಕ ವಿವರಿಸಿದ ಆತ್ಮತತ್ತ್ವವೇ ವೇದಾಂತದ ಮುಖ್ಯ ಪ್ರಕ್ರಿಯೆಯಾಗಿ ಪರಿಣಮಿಸಿದೆ ಉದ್ದಾಲಕ.  

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ